ದೇವಗುಪ್ತ
	ಮಾಳವದೇಶದ ರಾಜ (600-605). ಮಹಾಸೇನಗುಪ್ತನ ಅನಂತರ ಆಳಿದವನು. ಮಹಾಸೇನಗುಪ್ತನೊಂದಿಗೆ ಇವನಿಗಿದ್ದ ಸಂಬಂಧವೇನೆಂದು ಗೊತ್ತಿಲ್ಲ. ದೇವಗುಪ್ತನೆಂಬ ರಾಜ ಮಾಳವಾಧಿಪನೆಂದೂ ವರ್ಧನರ ಪ್ರಬಲ ಶತ್ರುಗಳಲ್ಲಿ ಪ್ರಮುಖನೆಂದೂ ಹರ್ಷವರ್ಧನನ ಮಧುಬನ್ ತಾಮ್ರ ಶಾಸನದಲ್ಲಿ ಹೇಳಲಾಗಿದೆ. ಪ್ರಭಾಕರ ವರ್ಧನನ ಮರಣಾನಂತರ ದೇವಗುಪ್ತ ಕನ್ಯಾಕುಬ್ಜವನ್ನಾಳುತ್ತಿದ್ದ ಮೌಖರೀ ಮನೆತನದ ಗೃಹವರ್ಮನನ್ನು ಕೊಂದು ಅವನ ರಾಜ್ಯವನ್ನು ಕಬಳಿಸಲು ಯತ್ನಿಸಿದ. ಅವನ ರಾಣಿಯಾದ ರಾಜ್ಯಶ್ರೀಯನ್ನು ಸೆರೆಯಲ್ಲಿಟ್ಟ. ಇದನ್ನರಿತ ರಾಜ್ಯವರ್ಧನ ಕೋಪಗೊಂಡು ದೇವಗುಪ್ತನ ಮೇಲೆ ದಂಡೆತ್ತಿ ನಡೆದ. ಈ ಯುದ್ಧದಲ್ಲಿ ದೇವಗುಪ್ತ ಮರಣಹೊಂದಿದನೆಂದು ಊಹಿಸಲಾಗಿದೆ. ಇವನ ಮಿತ್ರನಾದ ಗೌಡದೇಶದ ಶಶಾಂಕ ಮೋಸದಿಂದ ರಾಜ್ಯವರ್ಧನನನ್ನು ಕೊಂದ. ಆದರೆ ರಾಜ್ಯವರ್ಧನನೊಡನಿದ್ದ ಭಂಣ್ಡಿ ಎಂಬವನು ರಾಜ್ಯವರ್ಧನನಿಗೆ ಶರಣಾಗಿದ್ದ ದೇವಗುಪ್ತನ ಸೇನೆಯನ್ನು ವಶಪಡಿಸಿಕೊಂಡು ಮಾಳವ ರಾಜ್ಯವನ್ನು ಗೆದ್ದನೆಂದು ಬಾಣಭಟ್ಟನ ಹರ್ಷ ಚರಿತದಲ್ಲಿ ಹೇಳಲಾಗಿದೆ.
(ಎಂ.ಎನ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ